ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಸುಭದ್ರೆಯ ಮೇಲೆ ಒರಗಿ ತೀರಿದ ಅರುವ ನಾರಾಯಣ ಶೆಟ್ಟರು

ಲೇಖಕರು :
ನಾರಾಯಣ ಯಾಜಿ
ಮ೦ಗಳವಾರ, ಜೂನ್ 25 , 2013

ಕೆಲವು ವರ್ಷಗಳ ಹಿಂದಿನ ಘಟನೆ. ತೆಂಕು ತಿಟ್ಟಿನ ಪೂರ್ವ ಸೂರಿಗಳಾದ ಕುರಿಯ ವಿಠಲ ಶಾಸ್ತ್ರಿಗಳ ಸ್ಮರಣಾರ್ಥ ಕನ್ಯಾನದಲ್ಲಿ ಒಂದು ಯಕ್ಷಗಾನವನ್ನು ಆಯೋಜಿಸಲಾಗಿತ್ತು. ಪ್ರಸಂಗ ದಕ್ಷ ಯಜ್ಞ. ತೆಂಕಿನ ಎಲ್ಲ ಘಟಾನುಘಟಿ ಕಲಾವಿದರೂ ಆ ಪ್ರಸಂಗದಲ್ಲಿ ಭಾಗವಹಿಸಿದ್ದರು. ಆ ಪ್ರಸಂಗದ ಈಶ್ವರನ ಪಾತ್ರ ಯಾರ ನಿರ್ವಹಿಸುತ್ತಾರೆ ಎಂದು ಎಲ್ಲರಿಗೂ ಕುತೂಹಲ. ಏಕೆಂದರೆ ಇಡಿಯ ಯಕ್ಷಗಾನ ವಲಯದಲ್ಲೇ ಕುರಿಯ ಶಾಸ್ತ್ರಿಗಳ ಈಶ್ವರ ಹೆಸರಾದದ್ದು. ಹಾಗಾಗಿ ಅವರ ಸ್ಮರಣಾರ್ಥ ನಡೆಯುವ ಪ್ರಸಂಗದಲ್ಲಿ ಆ ಪಾತ್ರದ ಕುರಿತು ನಿರೀಕ್ಷೆ ಅಪಾರ.


ಅಂದು ಈಶ್ವರನ ಪಾತ್ರದಲ್ಲಿ ಕಾಣಿಸಿಕೊಂಡು ಆ ದಿನದ ಆಟದ ಯಶಸ್ಸಿಗೆ ಕಾರಣರಾದವರು ಅರುವ ನಾರಾಯಣ ಶೆಟ್ಟಿಯವರು. ತೆಂಕು ತಿಟ್ಟಿನ ಯಕ್ಷಗಾನ ಮತ್ತು ಕಲಾವಿದರ ಕುರಿತು ಅಧಿಕಾರದಿಂದ ಮಾತಾಡಬಲ್ಲ ಮತ್ತು ಕುರಿಯ ಶಾಸ್ತ್ರಿಗಳ ಸಮೀಪದ ಬಂಧುವೂ ಆದ ಶ್ರೀ ಜಿ. ಕೆ. ಭಟ್ಟ ಸೇರಾಜೆಯವರ ಪ್ರಕಾರ ಅರುವ ಶೆಟ್ಟರು ಪಾತ್ರವನ್ನು ಕೆಡಿಸದೇ ಅಚ್ಚುಕಟ್ಟಾಗಿ ಪ್ರದರ್ಶಿಸಬಲ್ಲ ಮತ್ತು ಎಂತಹ ಪಾತ್ರಕ್ಕಾದರೂ ಜೀವತುಂಬಬಲ್ಲ ಸಹೃದಯೀ ಕಲಾವಿದ.


ಗುರು ವೀರಭದ್ರ ನಾಯ್ಕ, ಉಪ್ಪೂರರು, ಕೆರಮನೆ ಶಂಭು ಹೆಗಡೆ, ಚಿಪ್ಪಾರು ಬಲ್ಲಾಳರು ಮುಂತಾದವರನ್ನ ರಂಗದ ಮೇಲೆ ತನ್ನತ್ತ ಸೆಳೆದುಕೊಂಡ ಕಾಲ ಈ ಬಾರಿ ಆಯ್ಕೆ ಮಾಡಿಕೊಂಡಿದ್ದು ಅರುವ ನಾರಾಯಣ ಶೆಟ್ಟಿಯವರನ್ನು. ಸುಮಾರು ನಲವತ್ತೈದು ವರ್ಷಗಳ ಕಾಲ ಯಕ್ಷಗಾನದ ಉಭಯ ತಿಟ್ಟುಗಳಲ್ಲೂ ಹೆಸರುಮಾಡಿದ ಅರುವರು ಗಣೇಶ ಚತುರ್ಥಿಯ ಸಂಭ್ರಮದ ಮಧ್ಯೆಯೇ ಕೃಷ್ಣನ ವೇಷದಲ್ಲಿಯೇ ನಮ್ಮನ್ನಗಲಿದ್ದಾರೆ. ಹಾಗೆ ನೋಡಿದರೆ ಅವರು ಮೇಲೆ ಹೇಳಿದ ಕಲಾವಿದರಂತೆ ಯಕ್ಷಗಾನದ ಅತ್ಯಂತ ಶ್ರೇಷ್ಠ ಕಲಾವಿದರ ಸಾಲಿಗೆ ಸೇರಿರಲಿಲ್ಲ. ವ್ಯಕ್ತಿಯೊಬ್ಬನಿಗೆ ಯಶಸ್ಸು ಎಂಬುದು ದೊರೆಯಬೇಕಾದರೆ ಆಸಕ್ತಿ, ವಾತಾವರಣ, ಒಡನಾಟ, ಅಧ್ಯಯನ, ಪರಿಶ್ರಮ, ಅವಕಾಶ ಮತ್ತು ಯೋಗ ಸಿಗಬೇಕು.


ನಾರಾಯಣ ಶೆಟ್ಟರಿಗೆ ಅವಕಾಶ ಮತ್ತು ಯೋಗ ಇದ್ದಿದ್ದರೆ ಅವರಲ್ಲೋಬ್ಬ ಯಶಸ್ವೀ ಕಲಾವಿದ ಅರಳುತ್ತಿದ್ದ. ಆದರೂ ಇವರು ರಂಗದಲ್ಲಿ ತನ್ನದೇ ಆದ ಕೆಲ ಪಾತ್ರಗಳನ್ನಾದರೂ ನೆನಪಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ದೇವಿ ಮಹಾತ್ಮೆಯಲ್ಲಿನ ವಿಷ್ಣು ಹೆಸರಿಸಲೇ ಬೇಕಾದ ಪಾತ್ರ. ಅಲ್ಲಿ ಅವರು ಅನಾವಶ್ಯಕವಾಗಿ ಬ್ರಹ್ಮನಲ್ಲಿ ವಾಗ್ವಾದಕ್ಕೆ ತೊಡಗದೇ ಸಹಜವಾಗಿ ಆ ಪಾತ್ರದ ತುಂಟತನದಮೂಲಕ ಬ್ರಹ್ಮನನ್ನು ಗೆಲ್ಲುತ್ತಾರೆ. ಇವರು ಯಕ್ಷಗಾನ ಕಲಾವಿದರ ಜೊತೆಗೆ ನಾಟಕಗಳಲ್ಲಿಯೂ ಪಾತ್ರಮಾಡಿದ ಅನುಭವ ಇಲ್ಲಿ ವ್ಯಕ್ತವಾಗುತ್ತದೆ. ಹಾಗಾಗಿಯೇ ಇವರ ಪಾತ್ರಗಳು ಸ್ವಚ್ಛಂದವಾಗಿ ವಿಜೃಂಭಿಸುವದಿಲ್ಲ. ಎದುರಾಳಿಯನ್ನು ಗೌರವಿಸುವಿಕೆ ಅಲ್ಲಿ ಎದ್ದು ಕಾಣತ್ತದೆ.


ಅದೇರೀತಿ ಉಳಿದ ಪಾತ್ರಗಳು ಮಾತನಾಡುವಾಗ ಶೆಟ್ಟರು ಯಕ್ಷಗಾನದಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಕಾಣಸಿಗುವಂತೆ ಆಚಿ ಹೋಗಿ ತನ್ನದೇ ಲೋಕದಲ್ಲಿ ಇರುವಂತೆ ಇರುವದಿಲ್ಲ. ಅವರೂ ತನ್ನ ಮುಖ ಭಾವಗಳ ಮೂಲಕ ಸಂಚಾರಿ ಭಾವಗಳ ಪ್ರಕಟಣೆಗೆ ಪೂರಕವಾಗಿ ಅಭಿನಯಿಸುತ್ತಿರುವದನ್ನ ಇವರ ಕಟೀಲು ಕ್ಷೇತ್ರ ಮಹಾತ್ಮೆಯ ಜಾಬಾಲಿಯಲ್ಲಿ ನಾನು ನೋಡಿದ್ದೇನೆ. ಹೆಚ್ಚಿನದಾಗಿ ಸಾತ್ವಿಕ ಪಾತ್ರಗಳಲ್ಲಿ ಅಭಿನಯಿಸಿದ ಇವರು ರಾಮ, ಕೃಷ್ಣ, ಹರಿಶ್ಚಂದ್ರ, ಈಶ್ವರ ಈ ಬಗೆಯ ಪಾತ್ರಗಳನ್ನು ಉತ್ತಮವಾಗಿಯೇ ನಿರ್ವಹಿಸುತ್ತಿದ್ದರು.

ಅದರಲ್ಲೂ ಕೃಷ್ಣಾರ್ಜುನರಕಾಳಗದಲ್ಲಿನ ಕೃಷ್ಣನಲ್ಲಿ ಗಯನ ಕೊಲ್ಲುವ ಪ್ರತಿಜ್ಞೆಯಿಂದ ಹಿಡಿದು ಮುಂದೆ ಅರ್ಜುನನಲ್ಲಿ ಯುದ್ಧ ಮಾಡುವ ಸನ್ನಿವೇಷದವರೆಗೆ ಪಾಂಡವರ ಅದರಲ್ಲೂ ವಿಶೇಷವಾಗಿ ಅರ್ಜುನನ ಪರೀಕ್ಷೆಯ ಕಾಳಜಿಯೇ ಎದ್ದು ಕಾಣುತ್ತಿತ್ತು. ಇದು ತೆಂಕಿನ ಪರಂಪರೆಯ ನಡೆ. ಅವರ ಎಲ್ಲ ಪೌರಾಣಿಕ ಪಾತ್ರಗಳೂ ಸಹ ಪರಂಪರೆಯನ್ನೇ ಆಧರಿಸಿದ್ದವು. ಅಲ್ಲಿಯೇ ಅವರು ನಾವಿನ್ಯವನ್ನು ನೀಡಬಯಸಿದ್ದರೇ ಹೊರತು ಪ್ರಯೋಗಶೀಲವಾಗಿರಲಿಲ್ಲ. ಹಾಗಂತ ಅದು ಅನುಕರಣೆಯೂ ಆಗಿರಲಿಲ್ಲ. ಆ ಮಟ್ಟಿಗೆ ಸಮತೋಲನವನ್ನು ಸಾಧಿಸಿದ ಓರ್ವ ಅಪರೂಪದ ಕಲಾವಿದರಾಗಿದ್ದರು ಅವರು.


ಅದೇ ಅವರು ತುಳು ಪ್ರಸಂಗದಲ್ಲಿ ನಿರ್ವಹಿಸದ ಪಾತ್ರಗಳು ಹಾಗಿರಲಿಲ್ಲ. `ಕೋಟಿ ಚನ್ನಯ'ದ ಕೋಟಿ, ಪೆರುಮಲ ಬಲ್ಲಾಳ ಮತ್ತು `ಪರೆಕೆದ ಪಿಂಗಾರ'ದಲ್ಲಿನ ಚಂದನೆ ಮುಂತಾದವುಗಳಲ್ಲಿ ತಮ್ಮದೇ ಆದ ನಡೆಯನ್ನು ರೂಢಿಸುವಲ್ಲಿ ಅವರು ಸಫಲರಾಗಿದ್ದರು. ಅದರಲ್ಲೂ `ಪರೆಕೆದ ಪಿಂಗಾರ'ದ ಇವರ ಮತ್ತು ಸರಪಾಡಿ ಅಶೋಕ ಶೆಟ್ಟರ ಜೊಡಿ ಚಿತ್ರ ಚಂದನೆ ಅದ್ಭುತ ಯಶಸ್ಸನ್ನೇ ಗಳಿಸಿತ್ತು.


ಸಂಘಟಕರಾಗಿ ಅರುವ ನಾರಾಯಣ ಶೆಟ್ಟರು ಒಂದು ಪ್ರಮುಖ ಸಾಲಿನಲ್ಲಿ ನಿಲ್ಲುತ್ತಾರೆ. ಇವರೇ ಸಂಘಟಿಸಿದ್ದ ಶ್ರೀ ಸೋಮನಾಥೇಶ್ವರ ಮೇಳ ಅರುವ (ಅಳದಂಗಡಿ) ತೆಂಕಿನ ಯಕ್ಷಗಾನದ ಇತಿಹಾಸದಲ್ಲಿ ಒಂದು ಮಹತ್ವದ ಪಾತ್ರ ವಹಿಸುತ್ತದೆ. ಅದರಲ್ಲೂ ತುಳು ಯಕ್ಷಗಾನವನ್ನು ಹೊಸ ಎತ್ತರಕ್ಕೆ ಒಯ್ದ ಕೀರ್ತಿ ಆ ಮೇಳಕ್ಕಿದೆ. ಆ ಸಮಯದಲ್ಲಿ ಇವರಿಗೆ ಗಧಾಯುದ್ಧದ ಕೌರವ, ಜಮದಗ್ನಿ, ಅಕ್ರೂರ, ತುಳುನಾಡ ಸಿರಿಯ ಕೂಸ ಆಳ್ವ ಇವರೊಳಗಿನ ಕಲಾವಿದನನ್ನು ಹೊರತರುವಲ್ಲಿ ಯಶಸ್ವಿಯಾದವು. ಆದರೆ ಶೆಟ್ಟಿಯವರಿಗೆ ರಂಗಪ್ರಪಂಚದ ರಾಜನಾಗಿ ಮಿಂಚುವದು ಗೊತ್ತಿತ್ತೇ ಹೊರತು ವಾಸ್ತವದ ಬದುಕಿನ ರಾಜಕೀಯ ಗೊತ್ತಿರಲಿಲ್ಲ. ಹಾಗಾಗಿ ಆ ಮೇಳವನ್ನು ನಿಲ್ಲಿಸಬೇಕಾಯಿತು.


ನಾಟ್ಯ ಹಿತಮಿತವಾಗಿತ್ತು. ಅದರಲ್ಲಿ ಅವರು ತಮ್ಮ ಗುರು, ಗೋವಿಂದ ಭಟ್ಟರನ್ನು ನೆನಪಿಸುತ್ತಿದ್ದರು. ತಮ್ಮ ಸಂಬಂಧಿ ಅರುವ ಕೊರಗಪ್ಪ ಶೆಟ್ಟರಿಂದ ಪ್ರೇರಣಯನ್ನೂ ಮತ್ತು ಕಲಿಕೆಯನ್ನೂ ಪ್ರಾರಂಭದಲ್ಲಿ ಅವರು ಪಡೆದಿದ್ದರು. ಕರ್ನಾಟಕ ಮೇಳ, ಕಟೀಲು ಮೇಳ, ರಾಘವೇಂದ್ರ ಮೇಳ, ಸುಬ್ರಹ್ಮಣ್ಯ ಮೇಳ, ಮಂಗಳಾದೇವಿ ಮೇಳ, ಪುತ್ತೂರು ಮತ್ತು ಕುಂಬಳೆ ಮೇಳಗಳಲ್ಲಿ ಸೇವೆ ಸಲ್ಲಿಸಿದ ಇವರು ಅಲ್ಲೇಲ್ಲಾ ತಮ್ಮ ಕಲಾಜೀವನದ ಜೊತೆಗೆ ಸಹಕಲಾವಿದರ ಪ್ರೀತಿಯನ್ನೂ ಯಜಮಾನರುಗಳ ಅನುರಾಗವನ್ನೂ ಅಭಿಮಾನಿ ಬಳಗವನ್ನೂ ಹೊಂದಿದ್ದರು. ಸ್ವಲ್ಪ ಸಮಯ ಬಡಗಿನ ಪೆರ್ಡೂರು ಮೇಳದಲ್ಲಿಯೂ ಸೇವೆ ಸಲ್ಲಿಸಿದ್ದರು. ಈ ಎಲ್ಲವೂ ಯಕ್ಷಗಾನ ಕಲಾವಿದನಿಗೆ ಒಂದೇ ಸಲ ಸಿಗುವದು ಅಪರೂಪ.


ಪರಂಪರೆಯ ಬಗ್ಗೆ ಅಪಾರವಾದ ಗೌರವ ಹೊಂದಿದ ಇವರು ಆ ಕಾರಣಕ್ಕಾಗಿಯೇ ಓರ್ವ ಯಶಸ್ವೀ ಗುರುಗಳೂ ಆಗಿದ್ದರು. ಸರಪಾಡಿ ಶರಭೇಶ್ವರ ನಾಟ್ಯ ತರಬೇತಿ ಕೇಂದ್ರದಲ್ಲಿ ನಾಟ್ಯ ಗುರುವಾಗಿ ಅನೇಕ ಯಕ್ಷಗಾನ ಕಲಾವಿದರಿಗೆ ಮತ್ತು ಆಸಕ್ತರಿಗೆ ನಾಟ್ಯಭ್ಯಾಸ ಕಲಿಸಿದ್ದಾರೆ. ಆ ಸಂದರ್ಭದಲ್ಲಿ ಅವರು ಶಿಸ್ತು, ಮತ್ತು ಬಧ್ದತೆಯನ್ನು ಕಲಿಯುವವರಿಂದ ಅಪೇಕ್ಷಿಸುತ್ತಿದ್ದರು ಎಂದು ಅವರನ್ನು ಬಲ್ಲವರು ನೆನಪಿಸಿಕೊಳ್ಳುತ್ತಾರೆ.


೧೯೫೪ ಜೂನ್ ೧೨ ರಂದು ಮುತ್ತಣ್ಣ ಶೆಟ್ಟಿ ಚಲುವಮ್ಮ ದಂಪತಿಗಳ ಮಗನಾಗಿ ಜನಿಸಿದ ಶೆಟ್ಟರಿಗೆ ಸಾಯುವಾಗ ೫೮ ವರ್ಷ ವಯಸ್ಸು. ಪತ್ನಿ ಪುತ್ರ ಇಬ್ಬರು ಪುತ್ರಿಯರನ್ನು ಅಗಲಿ ಸೆಪ್ಟಂಬರ್ ೧೯ ರಂದು ಶಿರ್ಲಾಲಿನಲ್ಲಿ ಕೃಷ್ಣನ ಪಾತ್ರದಲ್ಲಿ ತಂಗಿಯ ಪಾತ್ರ ವಹಿಸಿದ್ದ ದಿವಾಕರ ದಾಸರ ಸುಭದ್ರೆಯಮೇಲೆ ಒರಗಿ ನಮ್ಮನ್ನಗಲಿದ್ದಾರೆ. ಯಕ್ಷಗಾನ ಓರ್ವ ಸಹೃದಯಿಯನ್ನು ಕಳೆದುಕೊಂಡು ಬಡವಾಗಿದೆ. ಮುಖ್ಯ ಪಾತ್ರಗಳನ್ನು ನಿರ್ವಹಿಸಬಲ್ಲ ಸಾಮರ್ಥ್ಯವಿದ್ದೂ ಎರಡನೇ ವೇಷಧಾರಿಯಾಗಿ ಇಡೀ ಕಥೆಗೇ ಜಿವ ತುಂಬಬಲ್ಲ ಅರುವರಂತಹ ಕಲಾವಿದರು ಹಾರದಲ್ಲಿ ಅರಳುವ ಮುತ್ತುಗಳಾಗಿ ಅಲ್ಲದಿದ್ದರೂ ಪರಂಪರೆಯನ್ನು ಜೀವಂತವಾಗಿಟ್ಟಿರುವ ಕೊಂಡಿಗಳಾಗಿ ಮುಖ್ಯರಾಗುತ್ತಾರೆ.

ಕೃಪೆ : http://www.kendasampige.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ